ಹುರುಳಿ ಭೀಮರಾವ್
	1889-1970. ಪತ್ರಿಕೋದ್ಯಮಿ ಹಾಗೂ ಸಾಹಿತಿ. ಶಿವಮೊಗ್ಗ ಜಿಲ್ಲೆಯ ಹುರುಳಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಾಮರಾಯ, ತಾಯಿ ಭಿಷ್ಟಮ್ಮ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಉಡುಪಿಯಲ್ಲೂ ಮಾಧ್ಯಮಿಕ ಶಿಕ್ಷಣ ಕೆಲವು ಕಾಲ ತೀರ್ಥಹಳ್ಳಿಯಲ್ಲೂ ಅನಂತರ ಉಡುಪಿ ಕ್ರಿಶ್ಚನ್ ಹೈಸ್ಕೂಲಿನಲ್ಲೂ ನಡೆಯಿತು. ಮೆಟ್ರಿಕ್ಯುಲೇಷನ್‍ವರೆಗೆ ವಿದ್ಯಾಭ್ಯಾಸ ಮುಂದುವರಿಸಿದ ಇವರು ಕೆಲಕಾಲ ಉಡುಪಿಯ ಸಂಸ್ಕøತ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಕೆಲಕಾಲ ಕಲ್ಲಿಕೋಟೆಯ ಕಾಲೇಜೊಂದರಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದರು. ಕಲ್ಲಿಕೋಟೆಯಲ್ಲಿ ಇರುವಾಗಲೇ ನೆಡುಂಗಾಡಿ ಬ್ಯಾಂಕ್‍ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಮಂಗಳೂರಿಗೆ ವರ್ಗವಾಗಿ ಬಂದರು. ಅನಂತರ ಇವರು ಪತ್ರಿಕೋದ್ಯಮರಂಗಕ್ಕೆ ಪ್ರವೇಶಿಸಿದರು. 	
											
(ಕೆ.ವಿ.)

	ವಿದ್ಯಾರ್ಥಿದೆಸೆಯಿಂದಲೇ ಲೇಖನ ವ್ಯವಸಾಯದಲ್ಲಿ ತೊಡಗಿದ ಇವರು ತಮ್ಮ ಪೂರ್ಣವೇಳೆಯನ್ನು ಪತ್ರಿಕೋದ್ಯಮಕ್ಕೆ, ಸಾಹಿತ್ಯ ಸೇವೆಗೆ ಮೀಸಲಿಟ್ಟರು. ಇವರ ಅನೇಕ ಲೇಖನಗಳು ಶ್ರೀಕೃಷ್ಣಸೂಕ್ತಿ, ಕಂಠೀರವ, ಸ್ವದೇಶಾಭಿಮಾನಿ, ಸಾಧ್ವಿ, ತಿಲಕಸಂದೇಶ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1919ರಲ್ಲಿ ಕಂಠೀರವ ಪತ್ರಿಕೆ ಪ್ರಕಟವಾಗತೊಡಗಿದಾಗ ಅದರಲ್ಲಿ ಹಂಗಾಮಿ ಸಂಪಾದಕರಾಗಿದ್ದ ಇವರು 1932ರ ವೇಳೆಗೆ ಆ ಪತ್ರಿಕೆಯ ಪೂರ್ಣಾವಧಿಯ ಸಂಪಾದಕರಾಗಿ 1967ರಲ್ಲಿ ಅದು ನಿಂತುಹೋಗುವವರೆಗೆ ಸುಮಾರು 35 ವರ್ಷಗಳ ಕಾಲ ಕಂಠೀರವದ ಏಳಿಗೆಗಾಗಿ ದುಡಿದರು. ಇವರು ಸಂಪಾದಕರಾಗಿದ್ದಾಗ ಬರೆಯುತ್ತಿದ್ದ ಸಂಪಾದಕೀಯ ಬರೆಹಗಳು, ಗುಂಡನ ಗೆಜೆಟ್ ಕಾಲಂಗಳು ಪ್ರಖ್ಯಾತ ವಾಗಿದ್ದವು; ನಿಶಿತ ಬರೆವಣಿಗೆಗೆ, ದಿಟ್ಟ ನಿಲವಿಗೆ ಸಾಕ್ಷಿಯಾಗಿದ್ದವು. ಗುಂಡನ ಗೆಜೆಟ್ ವ್ಯಂಗ್ಯ ಹಾಗೂ ವಿಡಂಬನ ಶೈಲಿಗೆ ಹೆಸರಾಗಿತ್ತು. ಕಂಠೀರವ ಪತ್ರಿಕೆಯನ್ನು ಒಂದು ಉತ್ತಮ ವಾರಪತ್ರಿಕೆಯಾಗಿ ಬೆಳೆಸಿ ಪೋಷಿಸುವಲ್ಲಿ ಇವರು ವಹಿಸಿದ ಪಾತ್ರ ಮಹತ್ತ್ವದ್ದು. 

	ಇವರು ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ತಾರಾ ಎಂಬ ಐತಿಹಾಸಿಕ ಕಾದಂಬರಿ ಇವರ ಪ್ರಥಮ ಕೃತಿ(1913). ಪಾಪ ಪುಣ್ಯ (ಅನುವಾದಿತ ಕಾದಂಬರಿ, 1923), ಹಾಸನ ಟೋಪಿ (ನೀಳ್ಗತೆ, 1932), ಪಾಪೋಸಿನ ಪಜೀತಿ, ಗುಬ್ಬಿಪಾಯಸ, ಗಡ್ಡದ ಅಜ್ಜಯ್ಯ (ಮೂರು ಮಕ್ಕಳ ಕಥೆಗಳು, 1935) ರಜಿಯಾ ಬೇಗಂ (1944), ಮುರುಕು ದಂಬೂಕು (1947), ಆಧುನಿಕ ಭಾರತ (ಮೂರು ನಾಟಕಗಳು, 1949), ಸ್ವಲ್ಪ ನಗಬಾರದೆ ? (ತುಣುಕು ಹಾಸ್ಯ) - ಇವು ಇವರ ಇತರ ಕೃತಿಗಳು. ಮುರುಕು ದಂಬೂಕು ಮತ್ತು ಹಾಸನ ಟೋಪಿ (ಅಥವಾ ಹಳೆಯ ಮೆಟ್ರಿಕ್) ಕ್ರಮವಾಗಿ ಟಾಮ್ ಬ್ರೌನ್ಸ್ ಸ್ಕೂಲ್ ಡೇಸ್, ರಿಪ್‍ವಾನ್ ವಿಂಕಲ್ ಎಂಬ ಕೃತಿಗಳನ್ನು ಆಧರಿಸಿ ಬರೆದ ಪುಸ್ತಕಗಳು. ಇವುಗಳ ಭಾಷೆ ಹಾಗೂ ಶೈಲಿ ಸರಳವಾಗಿದ್ದು ಓದುಗರನ್ನು ಸೆರೆಹಿಡಿಯುತ್ತವೆ. ಆಂಗ್ಲ ಕಥೆಯ ವಸ್ತುವನ್ನು ಸ್ವಂತ ನೆಲಕ್ಕೆ ಅಳವಡಿಸಿಕೊಂಡು ಆ ಕೃತಿಗಳ ಸಾರವನ್ನು ಕನ್ನಡಕ್ಕೆ ಭಟ್ಟಿ ಇಳಿಸುವಲ್ಲಿ, ವಾಚನಯೋಗ್ಯ ವಾಗಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಇವರ ಗದ್ಯ ಬರೆವಣಿಗೆಯಲ್ಲಿ ಒಂದು ಹದವಿದೆ; ಪಾಕವಿದೆ. ಅದು ಓದುಗನನ್ನು ಸೆರೆಹಿಡಿಯುತ್ತದೆ. 1960ರಲ್ಲಿ ಮಣಿಪಾಲದಲ್ಲಿ ನಡೆದ 42ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಕನ್ನಡ ಗದ್ಯಸಾಹಿತ್ಯವನ್ನು ಕುರಿತು ಮಾಡಿದ ಭಾಷಣ ವಿಚಾರಪರಿಪ್ಲುತವಾದುದು. ಯಕ್ಷಗಾನ, ನಾಟಕಾಭಿನಯಗಳಲ್ಲಿಯೂ ಇವರಿಗೆ ಅಪಾರ ಆಸಕ್ತಿಯಿತ್ತು. 

	ಮುದ್ದಣನನ್ನು ಸನಿಹದಿಂದ ಬಲ್ಲವರಾಗಿದ್ದ ಇವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಂದಳಿಕೆ ಲಕ್ಷ್ಮೀನಾರಾಯಣಯ್ಯನೇ ಮುದ್ದಣನೇ ಎಂಬ ವಾದ ಎದ್ದಾಗ ಈ ಎರಡೂ ಏಕವ್ಯಕ್ತಿಯ ಹೆಸರೆಂದೂ ಅದ್ಭುತರಾಮಾಯಣ, ಶ್ರೀರಾಮಪಟ್ಟಾಭಿಷೇಕ, ಶ್ರೀರಾಮಾಶ್ವಮೇಧ ಕೃತಿಗಳ ಕರ್ತೃ ಮುದ್ದಣನೇ ಎಂದೂ ಸಾಬೀತುಗೊಳಿಸುವಲ್ಲಿ ನೆರವಾದರು. ಕವಿ ಮುದ್ದಣನನ್ನು ಕುರಿತಂತೆ ಇವರ ಕೆಲವು ಲೇಖನಗಳು ಪ್ರಕಟವಾಗಿವೆ. ಇವರು 1970 ಆಗಸ್ಟ್ 4ರಂದು ನಿಧನಹೊಂದಿದರು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		
	*